ತಮಿಳಿನ ಗಮನಾರ್ಹ ಯುವ ಲೇಖಕ ‘ರಾಮ್ ತಂಗಂ’ ಕನ್ಯಾಕುಮಾರಿ ಜಿಲ್ಲೆಯ ನಾಗರ್‌ಕೋಯಿಲ್ ನಲ್ಲಿ 28-2-1988 ರಂದು ಜನಿಸಿದರು. ಅವರು ತಮ್ಮ ಶಾಲಾ ಶಿಕ್ಷಣವನ್ನು ಸಮತಾನ ಪುರಂ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಅಗಸ್ತೇಶ್ವರಂ ಸರ್ಕಾರಿ ಪ್ರೌಢಶಾಲೆಗಳಲ್ಲಿ ಪೂರೈಸಿದ್ದಾರೆ. ತಮಿಳುನಾಡು ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಬಿಎ ಮತ್ತು ಮಾಧ್ಯಮ ಕಲೆಯಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಓದುವ ಉತ್ಸಾಹದಿಂದ ಚಿಕ್ಕಂದಿನಿಂದಲೇ ಬರೆಯಲು ಆರಂಭಿಸಿದ ಇವರು ದಿನಕರನ್, ಆನಂದ ವಿಕಟನ್ ಪುರವಣಿಗಳಲ್ಲಿ ಬರಹಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಸಾಹಿತ್ಯ ಮತ್ತು ಸಿನಿಮಾ ಬರವಣಿಗೆಯಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.
ಇವರ ಮೊದಲ ಪುಸ್ತಕ ‘ಗಾಂಧಿ ರಾಮನ್’ ಮಾರ್ಚ್ 2015 ರಲ್ಲಿ ಬಿಡುಗಡೆಯಾಗಿದೆ. ಈ ಕೃತಿಯನ್ನು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಲೇಖಕ ‘ಪೊನ್ನೀಲನ್’ ಪ್ರಕಟಿಸಿರುವುದು ವಿಶೇಷ. ಈ ಕೃತಿ ಹೋರಾಟಗಾರ ‘ಗಾಂಧಿ ರಾಮನ್’ ಅವರ ಜೀವನ ಚರಿತ್ರೆಯನ್ನು ತೆರೆದಿಡುತ್ತದೆ. ರಾಮನ್ – ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರು, ಶೋಷಿತರ ದೇವಾಲಯ ಪ್ರವೇಶಕ್ಕಾಗಿ ನಡೆದ ವೈಕಂ, ಸುಚಿಂದ್ರಂ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದವರು. ಈ ಕೃತಿಗೆ ಸದರ್ನ್ ರೈಟರ್ಸ್ ಮೂವ್ಮೆಂಟ್ ಪ್ರಶಸ್ತಿ ಲಭಿಸಿದೆ.
ಕನ್ಯಾಕುಮಾರಿ ಜಿಲ್ಲೆಯ ಇತಿಹಾಸ, ಸಂಸ್ಕೃತಿ, ಸಂಪ್ರದಾಯಗಳು, ಅಲ್ಲಿನ ಹುತಾತ್ಮರು ಮತ್ತು ಬರಹಗಾರರ ಕುರಿತು ಬೆಳಕು ಚೆಲ್ಲುವ ಪ್ರವಾಸ ಕಥನ ಮಾದರಿಯ “ಊರ್ ಸೂತ್ರಿ ಪರವೈ” ತಂಗಂ ಅವರ ಎರಡನೇ ಕೃತಿ. ಈ ಕೃತಿಯನ್ನು 2015 ರಲ್ಲಿ ಜೆ.ಇ.ಪಬ್ಲಿಕೇಶನ್ಸ್ ಪ್ರಕಟಿಸಿದ್ದು ನಾಗರಕೋಯಿಲ್‌ನಲ್ಲಿ ಕಳಚುವಡು ಪ್ರಕಾಶನ ಸಂಸ್ಥೆಯ ಕಣ್ಣನ್ ಲೋಕಾರ್ಪಣೆ ಮಾಡಿದ್ದರು.
ಪ್ರಸ್ತುತ ‘ಊರ್ ಸೂತ್ರಿ ಪರವೈ’ ವನವಿಲ್ ಪುಸ್ತಕಾಲಯಂ ಮೂಲಕ ಮರುಮುದ್ರಣ ಕಂಡಿದೆ.
ಜನಪದ ಸಂಶೋಧಕ, ಇತಿಹಾಸಕಾರ ಎ.ಕೆ. ಪೆರುಮಾಳ್ ಅವರೊಂದಿಗಿನ ಒಡನಾಟ ಇವರಲ್ಲಿ ಜನಪದ, ನೆಲಮೂಲ ಸಂಸ್ಕೃತಿಗಳ ಕುರಿತು ಆಸಕ್ತಿ ಹುಟ್ಟುಹಾಕಿತು. ಇವರ ಮೂರನೇ ಕೃತಿ ‘ಮೀನವ ವೀರಂಕು ಒರು ಕೋವಿಲ್’ ಮೊಳಕೆಯೊಡೆದದ್ದು ಪೆರುಮಾಳ್ ಹೇಳಿದ ಒಂದು ಜನಪದ ಕತೆಯಿಂದ.
ದಕ್ಷಿಣ ನೆಲದ ಸಂಪ್ರದಾಯಗಳು, ನಂಬಿಕೆಗಳ ಕುರಿತಾದ ಈ ಪುಸ್ತಕವನ್ನು ಜೆಇ ಪಬ್ಲಿಕೇಶನ್ಸ್ ಪ್ರಕಟಿಸಿದೆ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಬರಹಗಾರ ಜೋ ಡಿ ಕ್ರೂಜ್ ಅವರು ನಾಗರ್‌ಕೋಯಿಲ್‌ನಲ್ಲಿ 2016ರ ಜನವರಿಯಲ್ಲಿ ಬಿಡುಗಡೆ ಮಾಡಿದರು. ವಿಶೇಷವೆಂದರೆ ರಾಮ್ ತಂಗಂ ಅವರ ಮೊದಲ ಮೂರು ಪುಸ್ತಕಗಳಿಗೆ ಇತಿಹಾಸಕಾರ ಎ.ಕೆ. ಪೆರುಮಾಳ್ ಅವರೇ ಮುನ್ನುಡಿ ಬರೆದಿದ್ದಾರೆ.
ಸಾಹಿತ್ಯ ರಚನೆಯೊಂದಿಗೆ ಇವರು ಸಾಹಿತ್ಯಿಕ ಸಂವಾದ, ಪುಸ್ತಕ ಪರಿಚಯದಂಥ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ತಮ್ಮ ಗೆಳೆಯರೊಡಗೂಡಿ ೨೦೧೬ರಲ್ಲಿ ‘ತ್ರಿವೇಣಿ ಸಾಹಿತ್ಯ ಸಂಗಮ’ವನ್ನು ಸ್ಥಾಪಿಸಿದರು. ತ್ರಿವೇಣಿ ಸಾಹಿತ್ಯ ಸಂಗಮವು ‘ಮಕ್ಕಳ್ ವಾಸಿಪ್ಪು ಇಯಕ್ಕಂ’ ಸಹಯೋಗದೊಂದಿಗೆ ನಾಗರಕೋಯಿಲ್‌ನಲ್ಲಿ ಮೂರು ಬಾರಿ ಪುಸ್ತಕ ಮೇಳ ಆಯೋಜಿಸಿದೆ.
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬರಹಗಾರ ನಂಜಿಲ್ ನಾದನ್ ಮತ್ತು ಅನುವಾದಕಿ ಕೆ.ವಿ.ಜಯಶ್ರೀ ಅವರಿಂದ ಉತ್ತೇಜನೆ ಪಡೆದ ತಂಗಂ ಕಥೆಗಳನ್ನು ಬರೆಯಲು ಪ್ರಾರಂಭಿಸಿದರು.
ನವೆಂಬರ್ 30, 2017ರಲ್ಲಿ ಮೊದಲ ಸಣ್ಣ ಕಥೆ ‘ತಿರುಕಾರ್ತಿಯಲ್’ ಆನಂದ ವಿಕಟನ್ ಪತ್ರಿಕೆಯಲ್ಲಿ ಪ್ರಕಟವಾಯಿತು. ಇದು ತಮಿಳು ಸಾಹಿತ್ಯವಲಯದಲ್ಲಿ ವ್ಯಾಪಕವಾಗಿ ಗಮನ ಸೆಳೆದದ್ದಲ್ಲದೆ ಜ್ಞಾನಿ ಕೋಲಂ ಪ್ರತಿಷ್ಠಾನದ ‘ಅಶೋಕಮಿತ್ರನ್’ ಪ್ರಶಸ್ತಿ ಪಡೆದುಕೊಂಡಿತು.
ಡಿಸೆಂಬರ್ 2018 ರಲ್ಲಿ, ವಂಶಿ ಬುಕ್ಸ್‌ನಿಂದ ಇವರ ಮೊದಲ ಸಣ್ಣಕಥಾ ಸಂಕಲನ ‘ತಿರುಕಾರ್ತಿಯಲ್’ ಪ್ರಕಟವಾಯಿತು. ಇದನ್ನು ಪತ್ರಕರ್ತ ಪಿ.ತಿರುಮಾವೇಲನ್ ಅವರು ಚೆನ್ನೈನಲ್ಲಿ ಬಿಡುಗಡೆಗೊಳಿಸಿದ್ದರು.
‘ತಿರುಕಾರ್ತಿಯಾಳ್’ ತಮಿಳು ಸಾಹಿತ್ಯದಲ್ಲಿ ರಾಮ್ ತಂಗಂಗೆ ವಿಶಿಷ್ಟವಾದ ಗುರುತು ನೀಡಿದ ಕೃತಿ. 2019ರ ಸುಜಾತಾ ಪ್ರಶಸ್ತಿ, ಉತ್ತರ ಚೆನ್ನೈ ತಮಿಳು ಸಾಹಿತ್ಯ ಪ್ರಶಸ್ತಿ, ಸೌಮ ಸಾಹಿತ್ಯ ಪ್ರಶಸ್ತಿ, ಪಡೈಪು ಸಾಹಿತ್ಯ ಪ್ರಶಸ್ತಿ, ಅಂಟ್ರಿಲ್ ಸಾಹಿತ್ಯ ಪ್ರಶಸ್ತಿ’ ಮುಂತಾದ ವಿವಿಧ ಪ್ರಶಸ್ತಿಗಳನ್ನು ಈ ಕೃತಿ ತನ್ನದಾಗಿಸಿಕೊಂಡಿದೆ.
ತಂಗಂ ೨೦೧೯ರಲ್ಲಿ ತಮಿಳಿನ ಹಿರಿಯ ಲೇಖಕ ಪೊನ್ನೀಲನ್ ಅವರಿಗೆ ನಾಗರ್‌ಕೋಯಿಲ್‌ನಲ್ಲಿ
ಅಭಿನಂದನಾ ಕಾರ್ಯಕ್ರಮ ಆಯೋಜಿಸಿದ್ದಲ್ಲದೆ
ಪೊನ್ನೀಲನ್-80 ಅಭಿನಂದನಾ ಗ್ರಂಥವನ್ನು ಸಂಪಾದಿಸಿದ್ದಾರೆ
2020 ರಲ್ಲಿ, ಲೇಖಕಿ ಚಾರು ನಿವೇದಿತಾ ಅವರು ಸಿಂಗಾಪುರದಲ್ಲಿ ‘ಮಾಯಾ ಲಿಟರರಿ ಸರ್ಕಲ್’ ಆಯೋಜಿಸಿದ್ದ ಕಿರು ಕಾದಂಬರಿ ಸ್ಪರ್ಧೆಯಲ್ಲಿ ರಾಮ್ ತಂಗಂ ಅವರ ಕಿರು ಕಾದಂಬರಿ ‘ರಾಜವನಂ’ ಅನ್ನು ಮೊದಲ ಬಹುಮಾನಕ್ಕೆ ಆಯ್ಕೆ ಮಾಡಿದರು. ಈ ಪುಸ್ತಕವನ್ನು ವಂಶಿ ಪಬ್ಲಿಕೇಷನ್ಸ್ ಪ್ರಕಟಿಸಿದೆ. ಇದು ವಿಜಯಾ ಓದುಗರ ಮಂಡಲದ ವತಿಯಿಂದ ನೀಡಲಾಗುವ ಪದೈಪು ಸಾಹಿತ್ಯ ಪ್ರಶಸ್ತಿ ಮತ್ತು ಕವಿ ಮೀರಾ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
“ನನ್ನಲ್ಲಿರುವ ಹುಡುಕಾಟದ ಮನೋಭಾವ ಮತ್ತು ಕುತೂಹಲ ನನ್ನನ್ನು ಓದುವಂತೆ ಮಾಡುತ್ತದೆ. ಓದು – ಬರವಣಿಗೆಗೆ ಹಚ್ಚುತ್ತದೆ. ಬರವಣಿಗೆ – ಓಡಾಟಕ್ಕೆ, ಪ್ರವಾಸಕ್ಕೆ ಕೀಲಿ ಕೊಟ್ಟು ಕಳಿಸುತ್ತದೆ. ಈ ಮೂರರ ಅನುಭವಗಳು ನನ್ನ ರಚನೆಗಳಲ್ಲಿ ಸೇರಿಕೊಳ್ಳುತ್ತವೆ”
-ರಾಮ್ ತಂಗಂ
ಇವರ ಎರಡನೇ ಸಣ್ಣ ಕಥೆಗಳ ಸಂಕಲನ ‘ಪುಲಿಕ್ಕುತಿ’ ಡಿಸೆಂಬರ್ 2021 ರಲ್ಲಿ ವಂಶಿ ಬುಕ್ಸ್‌ನಿಂದ ಪ್ರಕಟವಾಯಿತು. ಇದು ಸಂಕಲನ 2021ರ ಸೌಮ ಸಾಹಿತ್ಯ ಪ್ರಶಸ್ತಿ ಮತ್ತು ಪದೈಪು ಸಾಹಿತ್ಯ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.
“ ಪ್ರತಿ ಪುಸ್ತಕವು ಓದುಗರ ಮನಸ್ಸಿನಲ್ಲಿ ಅನೇಕ ಬದಲಾವಣೆಗಳನ್ನು ಉಂಟುಮಾಡುತ್ತದೆ. ಪ್ರವಾಸ ಹೊಸ ಜನಜೀವನವನ್ನು ಪರಿಚಯಿಸುತ್ತದೆ’ ಎನ್ನುವ ತಂಗಂ ಪ್ರಯಾಣದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ತಮ್ಮ ಪ್ರವಾಸದ ಅನುಭವಗಳನ್ನು ‘ದೇವರ ನಾಡು’ ಎಂದು ವನವಿಲ್ ಪುಸ್ತಕಾಲಯದ ಮೂಲಕ ಪುಸ್ತಕವಾಗಿ ತಂದಿದ್ದಾರೆ. ಇದು ಪಡೈಪು ಲಿಟರೇಚರ್ ಗ್ರೂಪ್‌ನ 2023 ರ ಅತ್ಯುತ್ತಮ ಪ್ರಬಂಧ ಪ್ರಶಸ್ತಿ ಗೆದ್ದುಕೊಂಡಿದೆ. ನ್ಯಾಷನಲ್ ಬುಕ್ ಟ್ರಸ್ಟ್‌ಗಾಗಿ ಅವರು ಮಕ್ಕಳ ಕಥೆಗಳನ್ನು ಇಂಗ್ಲಿಷ್‌ನಿಂದ ತಮಿಳಿಗೆ ಅನುವಾದಿಸಿದ್ದಾರೆ. ಅವುಗಳೆಂದರೆ ‘ಸೂರಿಯನೈ ಏತ ಯೆಜ್ವು ಪಡಿಕಲ್’, ‘ಕತ್ತಿಲೆ ಆನಂದಂ’ ಮತ್ತು ‘ಒರು ಸುಂಡೆಲೆಯಿನ್ ಕತಿ’. ಕನ್ಯಾಕುಮಾರಿ ಜಿಲ್ಲೆಯ ಐತಿಹಾಸಿಕ ಸಂಗತಿಗಳ ಕುರಿತಾದ ಅವರ ಪ್ರಬಂಧಗಳ ಸಂಕಲನ ‘ಚಿತ್ತಾರಲ್’
ಅಮೆಜಾನ್ ಕಿಂಡಲ್‌ನಲ್ಲಿ ಪ್ರಕಟವಾಗಿದೆ.
ಅನೇಕ ಕಾಲೇಜು ವಿದ್ಯಾರ್ಥಿಗಳು ರಾಮ್ ತಂಗಂ ಅವರ ಪುಸ್ತಕಗಳ ಬಗ್ಗೆ ಸಂಶೋಧನೆ ಮಾಡಿದ್ದಾರೆ.
‘ನನ್ನ ನೆಲವೇ ನನ್ನ ಕಥಾವಸ್ತು. ನನ್ನ ನೆಲದ ಜನರ ಬದುಕನ್ನು ಬರಹವಾಗಿಸುವುದು ನನಗೆ ಸುಲಭ’ ಎನ್ನುತ್ತಾರೆ ತಂಗಂ. ಅವರ ‘ತಿರುಕಾರ್ತಿಯಾಳ್’ ಕಥಾ ಸಂಕಲನಕ್ಕಾಗಿ ಅವರಿಗೆ 2023 ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ದೊರಕಿದೆ..
ತಿರುಕಾರ್ತಿಯಾಲ್‌ನ ‘ವೆಳಿಚಮ್’ ಎಂಬ ಸಣ್ಣ ಕಥೆಯನ್ನು ನಾಗರ್‌ಕೋಯಿಲ್‌ನ ಹೋಲಿ ಕ್ರಾಸ್ ಕಾಲೇಜಿನ ಪಠ್ಯಕ್ರಮದಲ್ಲಿ ಸೇರಿಸಲಾಗಿದೆ.
ಸಾಹಿತ್ಯ ಅಕಾಡೆಮಿಯ ಪ್ರಕಟಣೆಯಾಗಿ ಲೇಖಕಿ ಭಾರತಿ ಬಾಲನ್ ಅವರು ಸಂಕಲಿಸಿದ ತಮಿಳು ಸಣ್ಣ ಕಥೆಗಳ 2000-2020 ರ ಸಂಕಲನಕ್ಕೆ ‘ತಿರುಕಾರ್ತಿಯಲ್’ ಸಂಗ್ರಹದ ‘ಕದಂತು ಪೋಗುಂ’ ಎಂಬ ಸಣ್ಣ ಕಥೆಯನ್ನು ಆಯ್ಕೆ ಮಾಡಲಾಗಿದೆ.
ಈ ಕಥೆಯನ್ನು ಅನುವಾದಕ ರಘುರಾಮ್ ಮಂಜೇರಿ ಅವರು ‘ಕಡಂತು ಪೊಗೊಂ’ ಎಂಬ ಶೀರ್ಷಿಕೆಯಡಿಯಲ್ಲಿ ಮಲಯಾಳಂಗೆ ಅನುವಾದಿಸಿದ್ದಾರೆ ಮತ್ತು ಜೂನ್ 2023 ರಲ್ಲಿ ದೇಸಾಬಿಮಾನಿ ವಾರಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ.
ತಿರುಕಾರ್ತಿಯಲ್ ಕುರಿತ ಸಂದರ್ಶನವನ್ನು 25ನೇ ಆಗಸ್ಟ್ 2023 ರಂದು ಆತ್ಮ ಆನ್‌ಲೈನ್ ಮಲಯಾಳಂ ವೆಬ್‌ಸೈಟ್‌ನ ಆರ್ಟೆರಿಯಾ ವೀಕ್ಲಿ ಇ-ಮ್ಯಾಗಜಿನ್‌ನಲ್ಲಿ ಪ್ರಕಟಿಸಲಾಗಿದೆ.
ತರುವಾಯ, ರಾಮ್ ತಂಗಂ ಅವರ ಸಂದರ್ಶನವನ್ನು ಸೆಪ್ಟೆಂಬರ್ 11, 2023 ರಂದು ಮಲಯಾಳಂ ವಾರಪತ್ರಿಕೆ ‘ಮಧ್ಯಮಮ್’ ಕವರ್ ಸ್ಟೋರಿಯಾಗಿ ಪ್ರಕಟಿಸಲಾಯಿತು.
ಇದೇ ಪತ್ರಿಕೆಯಲ್ಲಿ ‘ತಿರುಕಾರ್ತಿಯಾಳ್’ ಕಥೆಯನ್ನು ಶಾಫಿ ಚೆರುಮಾವಿಲೈ ಅವರು ಅನುವಾದಿಸಿ ‘ತಿರುಕಾರ್ತಿಕಾ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ್ದಾರೆ.
ಡಿಸೆಂಬರ್ 2023 ರಲ್ಲಿ, ರಾಮ್ ತಂಗಂ ಬರೆದ ವಾರಣಂ ಕಾದಂಬರಿಯನ್ನು ವಂಶಿ ಬುಕ್ಸ್ ಪ್ರಕಟಿಸಿದೆ.